ನಿಯಂತ್ರಣದ ದೋಷ: ಗೌರವಾನ್ವಿತ ಲೋಕಾಯುಕ್ತ ನ್ಯಾಯಾಧೀಶರ ಪ್ರಮಾಣಿಕ ಭೇಟಿಯ ಗೌಪ್ಯತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಲೀಕ್ ಆಗಿರುವ ಸಾಧ್ಯತೆ

"ಮುಳಬಾಗಿಲಿನಲ್ಲಿ ತುರ್ತು ಸಂದೇಶದಿಂದ ಲೋಕಾಯುಕ್ತ ಭೇಟಿ ಗೌಪ್ಯತೆ ದಿಕ್ಕುತಪ್ಪಿದ ಘಟನೆ" ಮುಳಬಾಗಿಲು ತಾಲೂಕಿನಲ್ಲಿ ಕರ್ತವ್ಯಕ್ಕೆ ಬರುವ ಗೌರವಾನ್ವಿತ ಲೋಕಾಯುಕ್ತ ನ್ಯಾಯಾಧೀಶರ ಭೇಟಿ ಖಾಸಗಿತ್ವವನ್ನು ಶಿಕ್ಷಣ ಇಲಾಖೆಯ ಕೆಲವು ಅಧಿಕಾರಿಗಳಿಂದಾಗಿ ಲೀಕ್ ಆಗಿರುವುದು, ವ್ಯವಸ್ಥೆಯ ಯಥಾರ್ಥತೆಯನ್ನು ತಪಾಸಣೆ ಮಾಡುವಂತಹ ಬೆಲೆ ಬಾಳುವ ಅಗತ್ಯವನ್ನು ಪ್ರಶ್ನಿಸಿದೆ. ಕರ್ತವ್ಯದ ಬದ್ಧತೆಯನ್ನು ಎತ್ತಿ ಹಿಡಿಯಬೇಕಾದ ಸಂದರ್ಭದಲ್ಲಿ, ಈ ಘಟನೆ ಮಾದರಿಯು ಸರ್ಕಾರದ ಸಮರ್ಪಕತೆಯ ಮೇಲೆ ಪ್ರಭಾವ ಬೀರಲಿದೆ ಎಂದು ಅನಿಸುತ್ತದೆ. ಆದ್ದರಿಂದ, ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕೆಂದು ಈ ದ್ರೋಹವನ್ನು ಸ್ಪಷ್ಟವಾಗಿ ತಿಳಿಸಿ, ಜಾಗೃತ ಸಂದೇಶ ನೀಡಲಾಗಿದೆ.

NATIONALMULBAGALSTATENEWS

editor@kmfnews

4/3/20251 min read

ಸರ್ಕಾರಿ ಕೆಲಸ ದೇವರ ಕೆಲಸ ಎಂದು ಹೇಳಿದ ಮಹನೀಯರಾದ ಹಾಗೂ ವಿಧಾನಸೌಧದ ಇಂದಿನ ಹಿರಿಮೆಯ ಅಂದಿನ ಕರ್ತೃ ಕೆಂಗಲ್ ಹನುಮಂತಯ್ಯನವರು ರಾಜಕೀಯವನ್ನು ಸೇವಾ ವ್ಯಾಪ್ತಿಯ ಮನೋಭಾವದಿಂದ ಕಂಡಂತಹ ಶ್ರೇಷ್ಠರು. ಅಂದಿನ ಎಲ್ಲ ನಾಯಕರು ಮತ್ತು ಮಹನೀಯರು ನಮಗೆ ಇಂದು ಸಂವಿಧಾನದ ಪಾರದರ್ಶಕ ವ್ಯವಸ್ಥೆಯ ಮೂಲವಾದಂತಹ ಜವಾಬ್ದಾರಿಯುತ ಆಡಳಿತ ವ್ಯವಸ್ಥೆಯ ಸೇವೆಯು ಪ್ರತಿಯೊಬ್ಬ ಪ್ರಜೆಗೂ ತನ್ನ ರಾಷ್ಟ್ರೀಯತೆಯಡೆಗಿನ ಗೌರವವನ್ನು ಮತ್ತು ಸಂವಿಧಾನದ ಮೇಲಿನ ನಂಬಿಕೆಯನ್ನು ಹೆಚ್ಚಿಸುವಂತೆ ಇರಬೇಕು ಎಂದು ಸಾಧಿಸಿ ತೋರಿಸಿರುತ್ತಾರೆ.

ಇಂದು ವಿಪರ್ಯಾಸ ಎಂದರೆ ಸಂವಿಧಾನದ ವ್ಯವಸ್ಥೆಯಲ್ಲಿ ಸರ್ಕಾರಿ ಸೇವೆ ಎಂಬ ಮಾತು ಬಹಳ ಕಡಿಮೆಯಾಗಿದೆ, ಬದಲಿಗೆ ಸರ್ಕಾರಿ ನೌಕರಿ ಎಂಬ ವ್ಯವಸ್ಥೆಗೆ ಸಂವಿಧಾನ ತಲುಪಿರುವುದು ಬಹಳ ಶೋಚನೀಯ ಸಂಗತಿ. ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಯ ಬೆವರಿನ ಹನಿಯಿಂದ ಹಾಗೂ ನಮ್ಮ ಭಾರತಾಂಬೆಯ ತ್ಯಾಗಮಯಿ ನಿಲುವಿನಿಂದ ಸಿಗುವಂತಹ ಸೌಕರ್ಯದ ಫಲವಾಗಿ ಸಿಗುವ ಕರ್ಮಗಳ ಮಿಶ್ರಣದ ಹಣವು, ಸರ್ಕಾರಿ ಕೆಲಸ ದೇವರ ಕೆಲಸ ಎನ್ನುವ ಮಾತಿಗೆ ಕಾರ್ಯಾಂಗ ಶಾಸಕಾಂಗ ನ್ಯಾಯಾಂಗ ಹೀಗೆ ಸಂವಿಧಾನದ ಪ್ರತಿ ಹಂತಕ್ಕೂ ಊಟವನ್ನು ಇಡುತ್ತಿರುವ ಸತ್ಯ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯ, ಏಕೆಂದರೆ ನಾವು ಕಳ್ಳತನದಿಂದ ಭ್ರಷ್ಟಾಚಾರದಿಂದ ಹಾಗೂ ಧರ್ಮ ದ್ರೋಹದಿಂದ ಅಥವಾ ಇನ್ಯಾವುದೇ ಹೀನ ಕೃತ್ಯಗಳಿಂದ ಬರುವ ಹಣದಿಂದ ನಮ್ಮ ಆಡಳಿತವನ್ನು ನಡೆಸಿಕೊಳ್ಳುತ್ತಿಲ್ಲ ಹಾಗೂ ನಮ್ಮ ಆಡಳಿತ ವ್ಯವಸ್ಥೆ ಅಡಿಯಲ್ಲಿ ಬರುವ ಸಂವಿಧಾನದ ಮೂಲ ಪ್ರಜೆಗಳ ಸೇವಕರಾದ ಶಾಸಕಾಂಗ ಮತ್ತು ಕಾರ್ಯಾಂಗ ಯಾವುದೇ ಕಾರಣಕ್ಕೂ ಸ್ವಾಭಿಮಾನ ಹೀನರಾಗಬಾರದು ಹಾಗೂ ತಮ್ಮ ಮಕ್ಕಳಿಗೆ ಒಳ್ಳೆಯ ತಂದೆ ತಾಯಿಯಾಗಿ ರಾಷ್ಟ್ರಕ್ಕೆ ಮಾದರಿಯಾಗಿರಬೇಕು ಎಂಬುವ ನಿಟ್ಟಿನಲ್ಲಿ ಕನಿಷ್ಠ ಕೂಲಿ ಕಾರ್ಮಿಕನಿಂದ ಹಿಡಿದು ಗರಿಷ್ಠ ಉದ್ಯಮಿಯವರೆಗೂ ನಮ್ಮ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರು ದುಡಿಯುವ ಹಣದ ಒಂದಿಷ್ಟು ಭಾಗ ಕಲೆಹಾಕಿ ನಮ್ಮ ವ್ಯವಸ್ಥೆಗೆ ಪೋಷಣೆ ಮಾಡುತ್ತಿರುವುದು ಇಡೀ ಪ್ರಪಂಚಕ್ಕೆ ಒಂದು ಮಾದರಿ ಹಾಗೂ ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆಯ ವಿಷಯವಾಗಿದೆ.

ಇನ್ನು ವಿಷಯಕ್ಕೆ ಬರುವುದಾದರೆ ಇಷ್ಟೆಲ್ಲ ವಿಷಯಗಳು ನಮ್ಮನ್ನು, ನಾವು ಭಾರತದ ಪ್ರಜೆಗಳು ಎಂಬ ಶ್ರೇಷ್ಠತೆಯನ್ನು ಹಾಗೂ ನಾವು ನಮ್ಮ ಮಕ್ಕಳಿಗೆ ಮಾದರಿ ತಂದೆ ತಾಯಿಗಳೆಂದು ಸಾರುವ ಅಂತಹ ಮತ್ತು ಅನ್ಯ ರಾಷ್ಟ್ರಗಳ ಎದುರು ನಾವು ನಮ್ಮ ಮಕ್ಕಳಿಗೆ ಹೀನ ಕೃತ್ಯದ ಹೇಸಿಗೆಯನ್ನು ಬೆರೆಸಿ ಜೀವನ ನಡೆಸುತ್ತಿಲ್ಲ ಎಂಬುದನ್ನು ಸಾರಿ ಹೇಳುತ್ತದೆ.

ಇಷ್ಟೆಲ್ಲ ವಿಷಯಗಳು ಮತ್ತು ವಿದ್ಯಮಾನಗಳ ನಡುವೆ ಮುಳಬಾಗಿಲು ತಾಲೂಕಿನಲ್ಲಿ ಇಂದು ದಿನಾಂಕ 3- 4- 2025 ರಂದು, ಇಡೀ ದೇಶವೇ ನಾಚಿಸುವಂತಹ ಕಾರ್ಯಾಂಗದ ಹೀನ ಕೃತ್ಯವು ನಡೆದಿದೆ, ಅದೇನೆಂದರೆ ಬೇಲಿಯೇ ಎದ್ದು ಹೊಲ ನುಗುವಂತೆ, ರಾಷ್ಟ್ರೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಿದ್ದ ಕಾರ್ಯಾಂಗ ವ್ಯವಸ್ಥೆಯ ಸರ್ಕಾರಿ ಸೇವೆಯಲ್ಲಿನ ಜವಾಬ್ದಾರಿ ಮರೆತಿರುವ ಕೆಲವು ರಾಷ್ಟ್ರ ದ್ರೋಹಿಗಳಿಂದ ಸಂವಿಧಾನದ ಅತಿ ಉಚ್ಚ ಅಂಗವಾದ ನ್ಯಾಯಾಂಗ ವ್ಯವಸ್ಥೆಯ ಒಂದು ಪ್ರಮುಖ ಶಕ್ತಿಯಾಗಿ ಭ್ರಷ್ಟಾಚಾರವನ್ನು ತಡೆಯುತ್ತಿದ್ದ ಲೋಕಾಯುಕ್ತ ನ್ಯಾಯಾಧೀಶರನ್ನು ದಿಕ್ಕು ತಪ್ಪಿಸಿರುವ ಘಟನೆ ನಡೆದಿದೆ.

ಜವಾಬ್ದಾರಿಯುತ ಪ್ರಜೆಗಳೇ ಹಾಗೂ ರಾಷ್ಟ್ರದ ಋಣದಿಂದ ಹೆಮ್ಮೆಯ ಜೀವನ ನಡೆಸುತ್ತಿರುವ ನಿಜವಾದ ಸರ್ಕಾರಿ ನೌಕರರೇ ಅಥವಾ ಸರ್ಕಾರಿ ಸೇವಕರೇ ಇಂದು ಲೋಕಾಯುಕ್ತ ನ್ಯಾಯಾಧೀಶರು ತಮ್ಮ ಕರ್ತವ್ಯಕ್ಕೆ ಬರುವ ವಿಚಾರವನ್ನು ಕೆಲವರು ತಮ್ಮ ತಮ್ಮ ಇಲಾಖೆಯ ಸರ್ಕಾರಿ ನೌಕರರಿಗೆ ಜಾಗರೂಕರಾಗಿ ಇರುವಂತೆ ಹೇಳಿರುವುದು ಎಷ್ಟು ಸರಿ? ಇದು ನ್ಯಾಯವೇ? ನಮಗೆ ಸಿಕ್ಕಿರುವ ದಾಖಲೆಯ ಅನುಸಾರ ಸುಮಾರು ಬೆಳಿಗ್ಗೆ 10 ಗಂಟೆ 55 ನಿಮಿಷಕ್ಕೆ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮುಳಬಾಗಿಲು ಹೆಸರಿನಲ್ಲಿ ಒಂದು ಸಂದೇಶವು ಸಾಕಷ್ಟು ಜನರಿಗೆ ತಲುಪಿದೆ ಹಾಗೂ ಇದರ ಮತ್ತಷ್ಟು ವಿಚಾರಣೆ ನಡೆಸಲು ಕ್ಷೇತ್ರ ಶಿಕ್ಷಣಾಧಿಕಾರಿ ರವರ ಮೊಬೈಲ್ ಡೇಟಾ ಪರಿಶೀಲನೆ ಆಗಬೇಕು ಅಥವಾ ಈ ವಿಷಯ ಯಾರು ಹರಿಬಿಟ್ಟಿರುತ್ತಾರೆ ಎಂದು ತನಿಖೆ ನಡೆಸಬೇಕು ಎಂಬುದು ಜವಾಬ್ದಾರಿಯುತ ಇಲಾಖೆಗಳಿಗೆ ಸಂಬಂಧಪಟ್ಟ ವಿಚಾರ. ಸಂದೇಶವು ಈ ರೀತಿ ಇರುತ್ತದೆ -

"ಅತಿ ತುರ್ತು

ಮಾನ್ಯ ಲೋಕಾಯುಕ್ತರು ಇಂದು ಮುಳಬಾಗಿಲು ತಾಲೂಕಿನ ಶಾಲೆಗಳಿಗೆ ಭೇಟಿ ನೀಡಲಿದ್ದು ಎಲ್ಲಾ ಶಿಕ್ಷಕರು ಸಮಯಕ್ಕೆ ಸರಿಯಾಗಿ ಹಾಜರಾಗಿ ಶೈಕ್ಷಣಿಕ ಕಾರ್ಯಗಳಲ್ಲಿ ತೊಡಗುವುದು,ಶಾಲಾ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು. ದಾಖಲೆಗಳನ್ನು ನಿರ್ವಹಿಸುವುದು. ಅಕ್ಷರ ದಾಸೋಹ ಅಡುಗೆ ಕೋಣೆ, ದಾಸ್ತಾನು ಕೊಠಡಿ ಸ್ವಚ್ಛವಾಗಿ ಇಟ್ಟುಕೊಳ್ಳುವುದು. ಆಹಾರಧಾನ್ಯಗಳನ್ನು ಸ್ವಚ್ಛವಾಗಿ ಕ್ರಮಬದ್ಧವಾಗಿ ಜೋಡಿಸಿ ಇಟ್ಟಿರುವುದು.

ಕ್ಷೇತ್ರ ಶಿಕ್ಷಣಾಧಿಕಾರಿಗಳು ಮುಳಬಾಗಿಲು

10:55 am"

ಲೋಕಾಯುಕ್ತ ನ್ಯಾಯಾಧೀಶರು ಬರುವ ವಿಚಾರವನ್ನು ಯಾರಿಗೂ ತಿಳಿಸಬಾರದು ಹಾಗೂ ಅವರು ಭೇಟಿ ನೀಡಿದಾಗ ಅಲ್ಲಿನ ನೈಜ ವ್ಯವಸ್ಥೆಯನ್ನು ಅರಿತು ಅಲ್ಲಿರುವ ತಪ್ಪುಗಳನ್ನು ಪರಿಶೀಲಿಸಿ ಸಂವಿಧಾನದ ವ್ಯವಸ್ಥೆಯನ್ನು ಎತ್ತಿ ಹಿಡಿಯುವ ಕರ್ತವ್ಯದಲ್ಲಿ ಇರುತ್ತಾರೆ. ಆದರೆ ಈ ರೀತಿಯ ಮುಂಜಾಗರು ಕಥೆಯು ನಿಜವಾದ ಕರ್ತವ್ಯ ಮಾಡುವವರಿಗೆ ಅವಶ್ಯಕತೆ ಇದೆಯೇ ಇಲ್ಲವೇ ಎಂದು ಒಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳಲೇಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ತಾವು ನಿಭಾಯಿಸಬೇಕು ಹಾಗೂ ಶಿಕ್ಷಕನ ಗೌರವಗಳನ್ನು ಎತ್ತಿ ಹಿಡಿಯಬೇಕು ಮತ್ತು ಮಕ್ಕಳ ಭವಿಷ್ಯವನ್ನು ಸರಿಯಾಗಿ ರೂಪಿಸುವ ನಿಟ್ಟಿನಲ್ಲಿ ಚಟುವಟಿಕೆಗಳನ್ನು ನಡೆಸಿ ತಮ್ಮ ಸೇವಾ ವ್ಯಾಪ್ತಿಯನ್ನು ನಿರ್ವಹಿಸಬೇಕು. ಅದನ್ನು ಬಿಟ್ಟು ಈ ರೀತಿಯ ಸಂದೇಶಗಳು ಪ್ರಸಕ್ತ ಸರ್ಕಾರಿ ಸೇವೆಯ ಸಮರ್ಪಕತೆಯನ್ನು ಪ್ರಶ್ನಿಸುವಂತಹ ಮನಸ್ಥಿತಿಗೆ ಸಮಾಜವನ್ನು ತರುತ್ತದೆ ಎಂಬುದರಲ್ಲಿ ಸಂಶಯವೇ ಇಲ್ಲ. ಹಾಗೂ ಈ ವಿಚಾರವು ಸಂವಿಧಾನದ ನಿಲುವಿನ ಮೇಲೆ ವಿಮರ್ಶಿಸಲು ಹೊರಟರೆ, ಇದೊಂದು ಸಂವಿಧಾನಿಕ ವ್ಯವಸ್ಥೆಯನ್ನು ದಿಕ್ಕು ತಪ್ಪಿಸುವ ಚಟುವಟಿಕೆ ಆಗಿರುತ್ತದೆ ಹಾಗೂ ಗೌಪ್ಯವಾದಂತಹ ವಿಚಾರವನ್ನು ಮತ್ತು ಲೋಕಾಯುಕ್ತರ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಹಾಗೂ ಅವರನ್ನು ದಿಕ್ಕು ತಪ್ಪಿಸಲು ಕಣ್ಣಿಗೆ ಕಾಣುವಂತೆ ವ್ಯವಸ್ಥೆಯನ್ನು ತಿದ್ದುವಂತಹ ದ್ರೋಹದ ಕೆಲಸವಾಗಿರುತ್ತದೆ ಎಂದು ಹೇಳಬಹುದು. ಈ ಸಂದೇಶವನ್ನು ಯಾರೇ ಕಳುಹಿಸಿರಲಿ, ಕನಿಷ್ಠ ಜ್ಞಾನ ಎಂದರೆ... ಒಂದು ವೇಳೆ ಲೋಕಾಯುಕ್ತ ನ್ಯಾಯಾಧೀಶರು ತಾವು ಬರುವ ವಿಷಯವನ್ನು ಸಾಮಾನ್ಯ ಬೇಟಿಗೆ ಮೀಸಲಿಟ್ಟ ಪಕ್ಷದಲ್ಲಿ ಅವರ ಜವಾಬ್ದಾರಿಯ ಅನುಸರಣೆಯಂತೆ ಎಲ್ಲಾ ಇಲಾಖೆಗಳಿಗೂ ಅವರು ತಲುಪುವ ಎಲ್ಲ ಕಚೇರಿಗಳಿಗೂ ಮುಂಚೆಯೇ ಸಂದೇಶ ತಲುಪಿಸಿ, ಕರ್ತವ್ಯ ಪಾಲನೆಯ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವಂತಹ ಜವಾಬ್ದಾರಿ ನಡೆಸುತ್ತಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.

ಅದೇನೆ ಇರಲಿ ಗೌರವಾನ್ವಿತ ಲೋಕಾಯುಕ್ತ ನ್ಯಾಯಾಧೀಶರು ವ್ಯವಸ್ಥೆಯನ್ನು ಪರಿಶೀಲಿಸಲು ತಮ್ಮ ಕರ್ತವ್ಯವನ್ನು ಮಾಡುವ ಸಂದರ್ಭದಲ್ಲಿ ಯಾರೇ ಆಗಲಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಬಾರದು ಹಾಗೂ ಇದು ಎಲ್ಲಾ ನಾಗರಿಕರ ಮತ್ತು ಪ್ರಜಾಸೇವಕರ ಕರ್ತವ್ಯ ಎಂಬುದನ್ನು ಮರೆಯಬಾರದು.. ಇನ್ನು ಮುಂದುವರಿದಂತೆ ಯಾರೇ ಬರಲಿ ತಮ್ಮ ಕರ್ತವ್ಯದಲ್ಲಿ ಶ್ರೇಷ್ಠತೆಯನ್ನು ಅನುಸರಿಸಬೇಕೆ ಹೊರತು, ತಮಗಿಂತ ಉನ್ನತ ಅಧಿಕಾರಿಗಳು ಬರುತ್ತಿದ್ದಾರೆ ಜಾಗರೂಕರಾಗಿರಿ ಎಂದು ಹೇಳುವುದಕ್ಕಿಂತ, ನಾವು ಈ ರಾಷ್ಟ್ರದ ಋಣದಲ್ಲಿದ್ದೇವೆ ಹಾಗೂ ಮಕ್ಕಳ ಭವಿಷ್ಯಕ್ಕಾಗಿ ನಾವು ಸದಾ ಕಾಲ ನಮ್ಮ ಕರ್ತವ್ಯವನ್ನು ಪ್ರಬುದ್ಧವಾಗಿ ಮಾಡಬೇಕು ಎಂಬಂತಹ ವಾತಾವರಣವನ್ನು ಸೃಷ್ಟಿಸುವುದು ಕ್ಷೇತ್ರಧಿಕಾರಿಗಳಾಗಿ ಯಾರೇ ಮಾಡುವ ನಿಜವಾದ ಸೇವೆಯಾಗಿರುತ್ತದೆ.

ಅದೇನೇ ಇರಲಿ ಇನ್ನು ಮುಂದೆ ಹೀಗೆ ಆಗದಿರಲಿ ಎಂಬುದಷ್ಟೇ ನಮ್ಮ ಜಾಗೃತ ಸಂದೇಶ.